ಮುಖ ಪುಟ
ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು ವಿಭಾಗ, ಮೈಸೂರು
ಪ್ರಾದೇಶಿಕ ಆಯುಕ್ತರ ಕಚೇರಿಯು ಸರ್ಕಾರದ ಆದೇಶ ಸಂಖ್ಯೆ:ಕಂಇ 09 ಬಿಎಂಎಂ 2003 ಬೆಂಗಳೂರು ದಿ:8-9-2005ರ ಮೇರೆಗೆ ಸ್ಥಾಪಿಸಲಾಗಿದೆ. ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ವ್ಯಾಪ್ತಿಗೆ ಎಂಟು ಜಿಲ್ಲೆಗಳು ಒಳಪಟ್ಟಿದ್ದು, ಪ್ರಾದೇಶಿಕ ಆಯುಕ್ತರು ಈ ಕೆಳಕಾಣಿಸಿದ ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುತ್ತಾರೆ.
1) ಮೈಸೂರು 2) ಮಂಡ್ಯ 3) ಚಾಮರಾಜನಗರ 4) ಹಾಸನ 5) ಚಿಕ್ಕಮಗಳೂರು 6) ಕೊಡಗು 7) ದಕ್ಷಿಣ ಕನ್ನಡ 8) ಉಡುಪಿ
ಈ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ , 13 ಉಪವಿಭಾಗಾಧಿಕಾರಿಗಳ ಕಚೇರಿ, 44 ತಾಲ್ಲೂಕು ಕಚೇರಿಗಳು ಮತ್ತು 5 ವಿಶೇಷ ತಹಶೀಲ್ದಾರರುಗಳ ಕಚೇರಿಗಳು ವ್ಯಾಪ್ತಿಗೆ ಒಳಪಟ್ಟಿರುತ್ತವೆ.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
1) ಸಿಬ್ಬಂದಿಗಳ ನಿರ್ವಹಣೆ, ಅಭಿವೃದ್ಧಿ, ತರಬೇತಿ ಮತ್ತು ಕಂದಾಯ ಇಲಾಖೆಯ ಮಾನವ ಸಂಪನ್ಮೂಲದ ಇತರೆ ವಿಷಯಗಳು
2) ಜಿಲ್ಲಾ, ಉಪವಿಭಾಗ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮಮಟ್ಟದ ಕಂದಾಯದ ಲೆಕ್ಕ ಮತ್ತು ಲೆಕ್ಕಪರಿಶೋಧನೆಗಳ ನಿರ್ವಹಣೆ, ವಾರ್ಷಿಕ ತಪಾಸಣೆ, ಅನಿರೀಕ್ಷಿತ ತಪಾಸಣೆ ಹಾಗೂ ಪರಿಶೀಲನೆ ಮತ್ತು ವಾರ್ಷಿಕ ಕಡ್ಡಾಯ ಜಮಾಬಂದಿ ನಡೆಸುವುದು
3) ಈ ಹಿಂದೆ ವಿಭಾಗಾಧಿಕಾರಿಗಳು ವಿವಿಧ ನಿಯಮ - ಅಧಿನಿಯಮಗಳಡಿ ಚಲಾಯಿಸುತ್ತಿದ್ದ ಶಾಸನಬದ್ಧ (ಮೇಲ್ಮನವಿ ಮತ್ತು ಪುನರಾವಲೋಕನ) ಅಧಿಕಾರ;
4) ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಭೂ ಮಾಪನ ಮತ್ತು ಭೂ ದಾಖಲೆಗಳ ಕಾರ್ಯ, ಮುಜರಾಯಿ ಕಚೇರಿಗಳ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸಗಳ ಮೇಲುಸ್ತುವಾರಿ ಅಧಿಕಾರ;
5) ತಪಾಸಣಾ ಪ್ರಾಧಿಕಾರ:- ಅಧೀನ ಕಚೇರಿಗಳಲ್ಲಿ ಕಾನೂನುಬದ್ಧವಾಗಿ ಸರ್ಕಾರದ ಸೂಚನೆ / ಆಜ್ಞೆಯ ಪ್ರಕಾರ ಮತ್ತು ಸ್ಥಾಯಿ ಆದೇಶಗಳನ್ವಯ ಕೆಲಸ / ಕಾರ್ಯನಿರ್ವಹಣೆ ಆಗುತ್ತಿದೆ ಎಂಬ ಬಗ್ಗೆ ತಪಾಸಣೆ ನಡೆಸುವುದು;
6) ಪ್ರಕೃತಿ ವಿಕೋಪ ಮತ್ತು ಬರಪರಿಹಾರ ವಿಷಯಗಳ ಮೇಲ್ವಿಚಾರಣೆ, ನಿಯಂತ್ರಣ ಮತ್ತು ಬೆಳೆ ಕಟಾವು ಪ್ರಯೋಗ ಹಾಗೂ ಭೂ ಕಂದಾಯ ಮಾಫಿ ಕಾರ್ಯಗಳ ಅಧಿಕಾರ;
7) ರಾಜ್ಯದಲ್ಲಿನ ಎಲ್ಲಾ ರೀತಿಯ ಚುನಾವಣೆಗಳ ಮೇಲ್ವಿಚಾರಣೆ;
8) ಭೂ ಮಂಜೂರಾತಿ, ಭೂ ಸ್ವಾಧೀನ, ಭೂ ಸುಧಾರಣೆ, ಭೂ ಕಂದಾಯ ವಸೂಲಿ, ಭೂ ಮಾಪನ ಮತ್ತು ಕಂದಾಯ ಇಲಾಖೆಯ ಗಣಕೀಕರಣ ಕಾರ್ಯಗಳ ಮೇಲುಸ್ತುವಾರಿ;
9) ತಮ್ಮ ಕಾರ್ಯಕ್ಷೇತ್ರದಲ್ಲಿ ಬರುವ ಜಿಲ್ಲೆ, ಉಪವಿಭಾಗ ಮತ್ತು ತಾಲ್ಲೂಕು ಕಛೇರಿಗಳಿಗೆ ಹಣಕಾಸು ಬಿಡುಗಡೆ, ವಾರ್ಷಿಕ ಆಯವ್ಯಯ ತಯಾರಿಕೆ, ಶಾಸನ ಸಭೆಗಳ ಪ್ರಶ್ನೆಗಳಿಗೆ ಉತ್ತರಿಸುವುದು ಹಾಗೂ ಶಾಸಕಾಂಗ ಉಪಸಮಿತಿಗಳಿಗೆ ವರದಿ ನೀಡುವುದು ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲಿಸುವುದು;
10) ತಮ್ಮ ಕಕ್ಷೆಯಲ್ಲಿ ಬರುವ ಎಲ್ಲಾ ಸರ್ಕಾರಿ ಇಲಾಖೆಗಳ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕನಿಷ್ಠ ತಿಂಗಳಿಗೊಮ್ಮೆಯಂತೆ ವಿಮರ್ಷಿಸುವುದು ಹಾಗೂ ಪರಿಶೀಲಿಸುವುದು;
11) ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸುವಲ್ಲಿ ಕೊರತೆಯಾದಲ್ಲಿ ಕಾರಣಗಳನ್ನು ಕಂಡುಹಿಡಿದು ಸಕಾಲಿಕ ಪರಿಹಾರೋಪಾಯಗಳನ್ನು ಸೂಚಿಸಿ ಅದರಂತೆ ಕ್ರಮ ಜರುಗಿಸುವುದು. ಅದಕ್ಕೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವುದು;
12) ಇದೂಇದೂ ಅಲ್ಲದೆ, ಅಭಿವೃದ್ಧಿ ಇಲಾಖೆಗಳ ತಪಾಸಣೆ, ತನಿಖೆ ಹಾಗೂ ಅವಶ್ಯವಿದ್ದಲ್ಲಿ ಪರಿವೀಕ್ಷಣೆ ನಡೆಸುವುದು;

- ಮೊದಲಬಾರಿಗೆ ಮೈಸೂರು ಕಂದಾಯ ವಿಭಾಗದಲ್ಲಿ ಇ-ಪೋರ್ಟಲ್ ವ್ಯವಸ್ಥೆ ಎನ್.ಐ.ಸಿ. ಮುಖಾಂತರ ರೂಪಿಸಿದೆ
- ವಿಭಾಗದ ಕಂದಾಯ ಇಲಾಖೆ ಕಚೇರಿಗಳು, ರಾಜ್ಯ ಸರ್ಕಾರಿ ಕಚೇರಿಗಳ ಮಾಹಿತಿಯನ್ನು ಇದರಲ್ಲಿ ಅಳವಡಿಸಲಾಗುತ್ತಿದೆ.
- ಆಡಳಿತ ನಿರ್ವಹಣೆಯಲ್ಲಿ ಸುಧಾರಣೆ ತರಲು ಹಾಗೂ ಮುಖ್ಯ ಸರ್ಕಾರಿ ಕೆಲಸಗಳ ನಿರ್ವಹಣೆಯನ್ನು ಮಾನಿಟರ್ ಮಾಡಲು ಇದು ಸಮಗ್ರವಾದ ಒಂದು ಇ-ಪ್ಲಾಟ್ ಫಾರಂ ಆಗಿರುತ್ತದೆ.
ಪ್ರಾದೇಶಿಕ ಆಯುಕ್ತರು, ಮೈಸೂರು ಇವರ ಕಚೇರಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿhttp://rcmysore.gov.in . ಈ ವೆಬ್ ವಿಳಾಸವನ್ನು ಸಂಪರ್ಕಿಸುವುದು.